ಲೆಬನೀಸ್ ರಾಕೆಟ್ ಸೊಸೈಟಿ

ಲೆಬನಾನ್ ಮಧ್ಯ ಪ್ರಾಚ್ಯದಲ್ಲಿರುವ ಒಂದು ಪುಟ್ಟ ದೇಶ. ಆಂತರಿಕ ಯುದ್ಧ, ರಾಜಕೀಯ ಅಸ್ಥಿರತೆ ಮತ್ತು ಇತರ ಕಾರಣಗಳಿಂದಾಗಿ ಆಗಾಗ  ಅಶಾಂತಿ, ಗೊಂದಲವನ್ನು ಎದುರಿಸಿಕೊಂಡು ಬಂದಿರುವ ದೇಶ. ಅಂತಹ ಪರಿಸ್ಥಿತಿಯಿದ್ದರೂ ಅರವತ್ತರ ದಶಕದಲ್ಲಿ, ಲೆಬನಾನ್ ದೇಶವು ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಕಳಿಸಲು ಪ್ರಾರಂಭಿಸಿತ್ತು. ಆ ಬಾಹ್ಯಾಕಾಶ ಯೋಜನೆಯನ್ನು ಪ್ರಾರಂಭಿಸಿದ್ದು ಒಬ್ಬ ಕಾಲೇಜು ಉಪನ್ಯಾಸಕ ಎನ್ನುವುದು ಆಶ್ಚರ್ಯದ ವಿಷಯ. ಆ ಉಪನ್ಯಾಸಕರ ಹೆಸರು ಮನೂಗ್ ಮನೂಗಿಯನ್.

ಮನೂಗ್ ಮನೂಗಿಯನ್
ಮನೂಗ್ ಮನೂಗಿಯನ್ ಹುಟ್ಟಿದ್ದು ಜೆರುಸಲೆಮ್‌ನಲ್ಲಿ. ಶಾಲಾ ವಿದ್ಯಾಭ್ಯಾಸ ಅಲ್ಲೇ ಮುಗಿಸಿದ್ದರು. ಅಮೆರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಲಿಯಲು ಸ್ಕಾಲರ್‌ಶಿಪ್ ದೊರೆಯಿತು. ಅಲ್ಲಿ ಕಲಿಯುವಾಗ, ಬಿಡುವಿನ ಸಮಯದಲ್ಲಿ, ಒಂದೇ-ಹಂತದ (single-stage) ರಾಕೆಟ್ ಮಾದರಿಯೊಂದನ್ನು ರಚಿಸಿದ್ದರು. ಆದರೆ, ಅದನ್ನು ಆಗಸಕ್ಕೆ ಕಳಿಸಲು ಬೇಕಾದ ಇಂಧನ ಮತ್ತು ಇತರ ವ್ಯವಸ್ಥೆ ಇರದ ಕಾರಣ, ಅದರ ಬಗ್ಗೆ ಮಂದೇನು ಮಾಡಲು ಹೋಗಲಿಲ್ಲ. ಪದವೀಧರರಾದ ಮೇಲೆ, ಲೆಬನಾನ್‌ನ ರಾಜಧಾನಿಯಾದ ಬೀರುಟ್‌ನ ಹೈಗಾಜಿಯನ್ ಕಾಲೇಜಿನಲ್ಲಿ (ಈಗ, ಹೈಗಾಜಿಯನ್ ವಿಶ್ವವಿದ್ಯಾಲಯ), ಉಪನ್ಯಾಸಕರಾಗಿ ಕೆಲಸ ಆರಂಭಿಸಿದರು. ಭೌತಶಾಸ್ತ್ರ ಮತ್ತು ಗಣಿತ ಉಪನ್ಯಾಸಕರಾಗಿದ್ದರು. ಮನೂಗಿಯನ್‌ರವರನ್ನು ಕಾಲೇಜಿನ ವಿಜ್ಞಾನ ಕ್ಲಬ್‌ನ ಮುಂದಾಳತ್ವ  ವಹಿಸಬೇಕೆಂದು ಕಾಲೇಜಿನವರು ಕೇಳಿಕೊಂಡರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯಿದ್ದ ಮನೂಗಿಯನ್ ಒಪ್ಪಿಕೊಂಡರು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಬೆಳೆಯುತ್ತದೆ ಎಂಬ ಇಚ್ಛೆಯಿಂದ, ಹಾಗೂ ತಮಗೂ ರಾಕೆಟ್ ಮಾಡುವ ಹವ್ಯಾಸ ಇದ್ದಿದ್ದರಿಂದ, ವಿಜ್ಞಾನ ಕ್ಲಬ್‌ನ ವಿದ್ಯಾರ್ಥಿಗಳಿಗೆ ರಾಕೆಟ್ ರಚಿಸುವ ಚಟುವಟಿಕೆ ನೀಡಿದರು. ಕ್ಲಬ್‌ಗೆ ಹೈಗಾಜಿಯನ್ ಕಾಲೇಜ್ ರಾಕೆಟ್ ಸೊಸೈಟಿ (ಎಚ್.ಸಿ.ಆರ್.ಎಸ್) ಎಂಬ ಹೆಸರಿಟ್ಟರು.

ಮನೂಗ್ ಮನೂಗಿಯನ್ (source: math.usf.edu)

ಹೈಗಾಜಿಯನ್ ಕಾಲೇಜ್ ರಾಕೆಟ್ ಸೊಸೈಟಿ
ರಾಕೆಟ್ ಸೊಸೈಟಿಯೇನೋ ಪ್ರಾರಂಭಿಸಿದರು, ಆದರೆ ಅದಕ್ಕೆ ಬೇಕಾದ ಹಣ ಸಂಗ್ರಹಿಸಲು ಕಷ್ಟವಾಯಿತು. ಸಂಬಳದಿಂದಲೇ ಒಂದಿಷ್ಟು ಹಣ ಕ್ಲಬ್‌ನ ಕಾರ್ಯಕ್ಕಾಗಿ ಮನೂಗಿಯನ್ ತೆಗೆದಿರಿಸಿದರು. ಅವರ ಸ್ನೇಹಿತರೊಬ್ಬರು ಸಹಾಯ ಮಾಡಿದರು. ಕಷ್ಟವಿದ್ದರೂ ರಾಕೆಟ್ ಮೇಲಿನ ಕೆಲಸ ಮುಂದುವರೆಯಿತು. ಮೊದಮೊದಲು ಸಿಂಗಲ್-ಸ್ಟೇಜ್ ರಾಕೆಟ್ ರಚಿಸುವತ್ತ ಗಮನ ಹರಿಸಿದರು. 1961ರ ಏಪ್ರಿಲ್‌ನಲ್ಲಿ ಎಚ್.ಸಿ.ಆರ್.ಎಸ್‌ನ ಮೊದಲ ರಾಕೆಟ್ ಆಕಾಶಕ್ಕೇರಿತು. ಸುಮಾರು ೧ ಕಿ.ಮೀ. ಮೇಲಕ್ಕೇರಿತು. ಕಾಲೇಜಿಗ ಸಮೀಪವಿದ್ದ ಬೆಟ್ಟದ ಮೇಲೆ ಹೋಗಿ ರಾಕೆಟ್ ಹಾರಿಸಿದ್ದರು. ಬೆಟ್ಟದಿಂದಾಚೆಗೆ ಕಣಿವೆ ಇದ್ದು ಜನವಸತಿ ಇಲ್ಲದ ಕಾರಣ, ಅಲ್ಲಿ ಯಾವುದೇ ಅಪಾಯವಿರದು ಎಂದೆನಿಸಿ ಅಲ್ಲಿಂದ ಹಾರಿಸಿದ್ದರು. ಮೊದಲನೇ ಪ್ರಯತ್ನದಲ್ಲಿ ಏನೂ ಅವಘಡ ಸಂಭವಿಸಲಿಲ್ಲ, ಆದರೆ ಜನರಿಗೆ ಅಪಾಯವಿರುವುದಿಲ್ಲ ಎಂಬ ಅನಿಸಿಕೆ ಎರಡನೇ ಪ್ರಯತ್ನದಲ್ಲಿ ಸುಳ್ಳಾಯಿತು. ಎರಡನೇ ಸಲ ಹಾರಿಸಿದ ರಾಕೆಟ್ ಪಥ ಬದಲಿಸಿ ಗ್ರೀಕ್ ಚರ್ಚ್ ಒಂದರ ಗೋಡೆಗೆ ಅಪ್ಪಳಿಸಿತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಆದರೆ ನಡೆದ ಅಪಘಾತದಿಂದಾಗಿ ಸರಕಾರದ ಗಮನ ಈ ಕ್ಲಬ್‌ನತ್ತ ಹರಿಯಿತು. ಎಲ್ಲೆಂದರಲ್ಲಿ ರಾಕೆಟ್ ಹಾರಿಸಬಾರದೆಂದೂ, ಸನೈನ್ ಎಂಬ ಬೆಟ್ಟದ ಮೇಲಿರುವ, ಲೆಬನಾನ್ ಸೇನೆಯು  ಬಳಸುವಂತಹ ಜಾಗವೊಂದಿದೆ, ಅಲ್ಲಿಂದ ರಾಕೆಟ್‌ಗಳನ್ನು ಹಾರಿಸಬಹುದೆಂದು ಸರಕಾರ ಕ್ಲಬ್‌ನ ಸದಸ್ಯರಿಗೆ ಸೂಚನೆ ನೀಡಿತು. 

ಕ್ರಮೇಣ ಎಚ್.ಸಿ.ಆರ್.ಎಸ್‌ನ ಚಟುವಟಿಕೆಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿತು. ದೇಶದ ರಾಷ್ಟ್ರಪತಿಯವರು ಮನೂಗಿಯನ್ ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕ್ಲಬ್‌ಗೆ ಸರಕಾರದ ವತಿಯಿಂದ ಧನಸಹಾಯ ನೀಡುವ ಪ್ರಸ್ತಾಪ ಮುಂದಿಟ್ಟರು. ಮನೂಗಿಯನ್‌ರಿಗೆ  ಈ ಯೋಜನೆಯನ್ನು ಕೇವಲ ವೈಜ್ಞಾನಿಕ ಹಾಗು ಶೈಕ್ಷಣಿಕ ದೃಷ್ಟಿಯಿಂದ ನೋಡಬೇಕೆಂಬ ಭಾವನೆಯಿದ್ದು, ಸೇನೆಯು ಇವರ ಕಾರ್ಯವನ್ನು ದುರುಪಯೋಗ ಪಡಿಸಬಹುದೆಂಬ ಚಿಂತೆಯಿತ್ತು. ಆದರೆ ಕ್ಲಬ್‌ಗೆ ಶಿಕ್ಷಣ ಇಲಾಖೆಯಿಂದ ಹಣ ಬರುವುದೆಂದು ತಿಳಿದ ಮೇಲೆ ಅವರ ಚಿಂತೆ ದೂರವಾಯಿತು. ಕ್ಲಬ್‌ನ ಕಾರ್ಯವು ಒಂದು ಕಾಲೇಜಿನ ಪಠ್ಯೇತರ ಚಟುವಟಿಕೆಯಾಗಿ ಉಳಿಯದೆ, ದೇಶಕ್ಕೆ ಹೆಮ್ಮೆ ತರುವಂತಹ ಯೋಜನೆಯಾಯಿತು. ಎಚ್.ಸಿ.ಆರ್.ಎಸ್‌ಗೆ ಲೆಬನೀಸ್ ರಾಕೆಟ್ ಸೊಸೈಟಿ ಎಂದು ಮರುನಾಮಕರಣ ಮಾಡಲಾಯಿತು.

ಮೊದಮೊದಲು ರಾಕೆಟ್‌ಗಳನ್ನು ಕಾರ್ಡ್ಬೋರ್ಡ್ ಮತ್ತು ಪೈಪುಗಳಿಂದ ತಯಾರಿಸುತ್ತಿದ್ದರು
(source: www.bbc.com)

ಸಿಡಾರ್ ರಾಕೆಟ್
ಮೊದಲನೇ ವರ್ಷ ಹಾರಿಸಿದ ಸಿಂಗಲ್-ಸ್ಟೇಜ್ ರಾಕೆಟ್‌ಗಳು ಸುಮಾರು ಒಂದೆರಡು ಕಿ.ಮೀ.ಗಳಷ್ಟು ಎತ್ತರಕ್ಕೆ ಹಾರುತ್ತಿದ್ದವು. ಲೆಬನಾನ್ ದೇಶದ ರಾಷ್ಟ್ರೀಯ ಲಾಂಛನವಾದ ಸಿಡಾರ್ ಮರಗಳ ಪ್ರತೀಕವಾಗಿ ಈ ರಾಕೆಟ್‌ಗಳಿಗೆ ಸಿಡಾರ್ ರಾಕೆಟ್ (CEDAR rocket) ಎಂದು ಹೆಸರಿಟ್ಟರು. ನಂತರದ ವರ್ಷ ಬಹು-ಹಂತದ (multi-stage) ರಾಕಟ್‌ಗಳನ್ನು ತಯಾರಿಸುವ ಕೆಲಸ ಆರಂಭಿಸಿಲಾಯಿತು. ಸೇನೆಯು ಹಳೆಯದಾದ, ಬಳಸದ ಕಟ್ಟಡವೊಂದನ್ನು ಸೊಸೈಟಿಯ ಕಾರ್ಯಕ್ಕಾಗಿ ದಾನವಾಗಿ ನೀಡಿತು. ಸೇನೆಯ ಬಾಲಿಸ್ಟಿಕ್ಸ್ ಪರಿಣಿತರೊಬ್ಬರನ್ನು ಸಲಹೆಗಾರರಾಗಿ ಸೊಸೈಟಿಗೆ ನೇಮಿಸಲಾಯಿತು. ಸಿಡಾರ್-2 (ಮಲ್ಟಿ-ಸ್ಟೇಜ್) ರಾಕೆಟ್‌ನ್ನು ಸನೈನ್ ಬೆಟ್ಟದಿಂದ ಹಾರಿಸಲಾಯಿತು; ಸುಮಾರು 15 ಕಿ.ಮೀ.ರಷ್ಟು ಮೇಲಕ್ಕೆ ಹಾರಿತು. ಒಮ್ಮೆ ರಾಕೆಟ್‌ನೊಂದಿಗೆ ಒಂದು ಇಲಿಯನ್ನೂ ಹಾಗೂ ಅದರೊಂದಿಗೆ ಇಳಿಸಲು ಬೇಕಾದ ಪ್ಯಾರಶೂಟ್‌ನ್ನು ಅಳವಡಿಸಿ ಕಳಿಸಬೇಕೆಂದು ಯೋಚನೆ ಮಾಡಿದ್ದರು. ಇಲಿಗೆ ಮಿಕ್ಕಿ ಎಂಬ ಹೆಸರಿಟ್ಟರು. ಆದರೆ ತಂಡದಲ್ಲಿದ್ದ ಪ್ರಾಣಿ ಪ್ರೇಮಿಯೊಬ್ಬರ ಮಾತು ಕೇಳಿ, ಮಿಕ್ಕಿಯ ಪ್ರಯಾಣದ ಯೋಚನೆ ಕೈಬಿಟ್ಟರು. ಕಳಿಸದೆ ಇದ್ದದ್ದು ಒಳ್ಳೆಯದೇ ಆಯಿತು, ಏಕೆಂದರೆ ಆ ಪ್ಯಾರಶೂಟ್ ತೆರೆಯಲೇ ಇಲ್ಲವಂತೆ. 1962ರ ನವಂಬೆರ್ ತಿಂಗಳಲ್ಲಿ, ಲೆಬನಾನ್‌ನ ಸ್ವಾತಂತ್ರ್ಯ ದಿನದಂದು ಸಿಡಾರ್-3 ಹಾರಿಸಲಾಯಿತು. 1964ರಲ್ಲಿ ಸಿಡಾರ್-4 ಹಾರಿಸುವುದರ ಪ್ರತೀಕವಾಗಿ ಅಂಚೆಚೀಟಿಗಳನ್ನು ಮುದ್ರಿಸಲಾಯಿತು. 1964ರಲ್ಲಿ ಹಾರಿಸಿದ ಸಿಡಾರ್-6 ಮತ್ತು ಸಿಡಾರ್-7 ಸುಮಾರು 6೦ ಕಿ.ಮೀ.ರಷ್ಟು ಮೇಲಕ್ಕೆ ಹಾರಿತು. 1967ರಲ್ಲಿ ಹಾರಿಸಿದ ಸಿಡಾರ್-8 100 ಕಿ.ಮೀ.ಕ್ಕಿಂತ ಆಚೆಗೆ ಹಾರಿ, ಕಾರ್ಮನ್ ರೇಖೆಯನ್ನು (ವಾಯುಮಂಡಲ ಮತ್ತು ಬಾಹ್ಯಾಕಾಶದ ನಡುವೆ ಇರುವ ಕಾಲ್ಪನಿಕ ರೇಖೆ) ದಾಟಿದ ಲೆಬನಾನ್‌ನ ಮೊದಲ ರಾಕೆಟ್ ಎಂಬ ಹೆಸರು ಪಡೆಯಿತು. 

ರಾಕೆಟ್ ಹಾರಿಸಲು ತಯಾರಿ – 1961 (source: www.telegraph.co.uk)
ಸಿಡಾರ್-3 ಉಡಾವಣೆ ದಿನದಂದು (source: www.bbc.com)
ಸಿಡಾರ್ ರಾಕೆಟ್ ಅಂಚೆಚೀಟಿಗಳು (source:www.bbc.com)

ಅಪಘಾತ
1964ರಲ್ಲಿ ಮನೂಗಿಯನ್ ರಜೆ ಪಡೆದು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದರು. ಆಗ ವಿದ್ಯಾರ್ಥಿಯೊಬ್ಬನು ಯಾವುದೋ ಒಂದು ಕೆಮಿಕಲನ್ನು ಇಂಧನವಾಗಿ ಬಳಸಿ ಪ್ರಯೋಗ ಮಾಡುವಾಗ ಸ್ಫೋಟವಾಗಿ, ಆ ವಿದ್ಯಾರ್ಥಿಯು ಒಂದು ಕಣ್ಣು ಕಳೆದುಕೊಂಡನು. ಅವನ ಸಹಾಯಕ್ಕೆ ಬಂದ ಇನ್ನೊಬ್ಬ ವಿದ್ಯಾರ್ಥಿಗೂ ಗಾಯ ಉಂಟಾಗಿತ್ತು. ಅವನು ಬಳಸಿದಂತಹ ಕೆಮಿಕಲ್ ಉಪಯೋಗಿಸಬಾರದೆಂದು ಮನೂಗಿಯನ್ ಹಿಂದೆ ಹೇಳಿದ್ದರೂ, ಆ ವಿದ್ಯಾರ್ಥಿಯು ಅವರ ಮಾತನ್ನು ಮೀರಿ ಅದನ್ನು ಬಳಸಿದ್ದ. ಈ ಸುದ್ದಿಯನ್ನು ಕೇಳಿದ ಮನೂಗಿಯನ್‌ರಿಗೆ ಸೊಸೈಟಿ ತನ್ನ ಕೈ ತಪ್ಪಿ ಹೋಗುತ್ತಿದೆ ಎಂದೆನಿಸಿತು.

ಅಂತ್ಯ
ನಿಧಾನವಾಗಿ ಲೆಬನಾನ್ ಸೇನೆಯು ರಾಕೆಟ್ ಸೊಸೈಟಿಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಿತು. ಈ ಯೋಜನೆಯ ಬಗ್ಗೆ ಸರಕಾರ ಹಾಗೂ ಸೇನೆಗೆ ಶೈಕ್ಷಣಿಕ ಅಥವ ವೈಜ್ಞಾನಿಕ ಆಸಕ್ತಿಯೇನು ಇರಲಿಲ್ಲ. ಸೇನೆಯ ಉಪಯೋಗಕ್ಕೆ ಬರುವಂತದ್ದೇನಾದರು ಮಾಡುವರು ಎಂಬ ನಿರೀಕ್ಷೆಯಿಂದ ಆಸಕ್ತಿ ತೋರಿಸಿದ್ದರು. ಶಾಂತಿಪ್ರಿಯರಾದ ಮನೂಗಿಯನ್‌ರಿಗೆ ಈ ವಿಷಯ ತಿಳಿದು ಬೇಸರವುಂಟಾಯಿತು. ಮೇಲಾಗಿ ಹಲವು ಗುಪ್ತಚರ ಸಂಸ್ಥೆಗಳು ಸೊಸೈಟಿಯ ಕೆಲಸದ ಬಗ್ಗೆ ನಿಗಾ ಇಡುತ್ತಿದೆ ಎಂದು ಮನೂಗಿಯನ್‌ರಿಗೆ ಅನಿಸಿತು. 1966ರಲ್ಲಿ ಹಾರಿಸಿದ ರಾಕೆಟೊಂದು ಮೆಡಿಟರೇನಿಯನ್ ಸಮುದ್ರದಲ್ಲಿ ನಿಂತಿದ್ದ ಒಂದು ಬ್ರಿಟಿಶ್ ನೌಕೆಯ ಕೆಲವೇ ಮೀಟರುಗಳಷ್ಟು ದೂರದಲ್ಲಿ ಬಂದು ನೀರಿಗೆ ಬಿತ್ತು. ಮೆಡಿಟರೇನಿಯನ್ ಸಮುದ್ರದಲ್ಲಿರುವ ದ್ವೀಪರಾಷ್ಟ್ರ ಸಿಪ್ರಸ್, ಲೆಬನೀಸ್ ರಾಕೆಟ್‌ಗಳ ಬಗ್ಗೆ ತಕರಾರೆತ್ತಿತು. ಇದಲ್ಲದೆ ನೆರೆಯ ದೇಶವೊಂದು ಮನೂಗಿಯನ್ ಮತ್ತು ಅವರ ತಂಡದವರಿಗೆ ಹಣದ ಆಮಿಷ ಒಡ್ಡಿತು. ರಾಕೆಟ್ ಬಗೆಗಿನ ಸಂಶೋಧನೆಯನ್ನು ತಮ್ಮ ರಾಷ್ಟ್ರದ ಸೇವೆಗಾಗಿ ಮಾಡಿದಲ್ಲಿ, ಬೇಕಾದಷ್ಡು ಹಣ ನೀಡುವರೆಂದು ಆಸೆ ತೋರಿಸಿದರು. ಈ ಎಲ್ಲಾ ವಿದ್ಯಮಾನಗಳಿಂದಾಗಿ ಬೇಸತ್ತ ಮನೂಗಿಯನ್ ಸೊಸೈಟಿಯಿಂದ ತಾನು ಹೊರಬರಬೇಕೆಂದು ನಿರ್ಧರಿಸಿದರು. ಲೆಬನಾನ್ ಬಿಟ್ಟು, ಪಿ.ಎಚ್.ಡಿ ಪದವಿವಾಗಿ ಮತ್ತೆ ಅಮೆರಿಕಾಗೆ ಹೋದರು. ಈಗ ಅಮೆರಿಕಾದ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂಡದಲ್ಲಿದ ಹಲವು ವಿದ್ಯಾರ್ಥಿಗಳೂ ಉನ್ನತ ವ್ಯಾಸಂಗಕ್ಕಾಗಿ ಇತರ ದೇಶಗಳಿಗೆ ತೆರಳಿದರು.

ಮನೂಗಿಯನ್‌ರವರ ನಿರ್ಗಮನದ ನಂತರವೂ ಸ್ವಲ್ಪ ಕಾಲ ಸೊಸೈಟಿಯು ಮುಂದುವರೆಯಿತು. 1967ರಲ್ಲಿ ಲೆಬನೀಸ್ ರಾಕೆಟ್ ಸೊಸೈಟಿಯ ಕೊನೆಯ ರಾಕೆಟ್ ಮೇಲಕ್ಕೆ ಹಾರಿತು. 1967ರಲ್ಲಿ ನಡೆದ ಆರು-ದಿನದ ಯುದ್ಧದಿಂದಾಗಿ (six-day war) ಮಧ್ಯ ಪ್ರಾಚ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನೆರೆಯ ದೇಶಗಳಲ್ಲದೆ ಇತರ ಪಾಶ್ಚಾತ್ಯ ದೇಶಗಳಲ್ಲಿಯೂ ಲೆಬನಾನ್‌ನ ರಾಕೆಟ್ ಯೋಜನೆಯಿಂದಾಗಿ ಆತಂಕ ಉಂಟಾಯಿತು. ಪರಿಣಾಮವಾಗಿ ಫ್ರಾನ್ಸ್ ಮತ್ತು ಕೆಲವು ದೇಶಗಳು ಲೆಬನಾನ್ ಮೇಲೆ ಒತ್ತಡ ಹೇರಿ, ರಾಕೆಟ್ ಸೊಸೈಟಿಯನ್ನು ಮುಚ್ಚುವಂತೆ ಮಾಡಿತು.

%d bloggers like this: