ಜಗದೀಶ್ಚಂದ್ರ ಬೋಸ್ ಬರೆದ ಪತ್ರ

ಭಾರತದ ಪ್ರಖ‍್ಯಾತ ವಿಜ್ಞಾನಿ, ಸರ್ ಜಗದೀಶ್ಚಂದ್ರ ಬೋಸ್‌ರವರು 1901ನೇ ಇಸವಿಯಲ್ಲಿ ಇಂಗ್ಲೆಂಡ್ ದೇಶದ ಲಂಡನ್‍ನಲ್ಲಿದ್ದಾಗ, ತಮ್ಮ ಸ್ನೇಹಿತ ಶ್ರೀ ರವೀಂದ್ರನಾಥ ಠಾಗೋರರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಈ ಸಾಲುಗಳಿದ್ದವು…
“ಈ ಲಕ್ಷಾಧಿಪತಿಯೊಬ್ಬನು ಇನ್ನಷ್ಟೂ ಲಾಭ ಪಡೆಯುವ ಆಸೆಯಿಂದ ನನ್ನ ಬಳಿ ಭಿಕ್ಷುಕನಂತೆ ಬಂದಿದ್ದಾನೆ. ಗೆಳೆಯಾ, ಈ ದೇಶದಲ್ಲಿ ಹಣದ ಬಗೆಗಿರುವ ಹಾತೊರೆತ ಮತ್ತು ದುರಾಸೆಯನ್ನು ನೀವೂ ನೋಡಿರುತ್ತೀರಿ- ಹಣ, ಹಣ – ಎಲ್ಲೆಡೆ ಹರಡಿರುವ ಅತಿಯಾದ ದುರಾಸೆ! ನಾನೇನಾದರು ಈ ಭಯಾನಕ ಜಾಲದಲ್ಲಿ ಸಿಕ್ಕಿಬಿದ್ದರೆ, ಪಾರಾಗಲು ಸಾಧ್ಯವಿಲ್ಲ! ಈಗ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸಂಶೋಧನೆ, ವ್ಯಾಪಾರಿಕ ಲಾಭದ ಹೊರತಾಗಿದೆ. ನನಗೆ ವಯಸ್ಸಾಗುತ್ತಿದೆ – ಏನು ಮಾಡಬೇಕೆಂದು ಹೊರಟಿದ್ದೇನೋ, ಅದಕ್ಕೆ ಸಮಯ ಸಾಲುತ್ತಿಲ್ಲ – ಅವನನ್ನು ನಿರಾಕರಿಸಿದೆ.”
ಜೇ. ಸಿ. ಬೋಸ್‌ರವರು ಏಕೆ ಈ ಸಾಲುಗಳನ್ನು ಬರೆದಿದ್ದರು? ಯಾರು ಈ ಲಕ್ಷಾಧಿಪತಿ? ಈ ಸಾಲುಗಳ ಹಿಂದಿರುವ ಕಥೆಗೂ ನಮ್ಮ ಮೊಬೈಲ್ ಫೋನ್‌ಗಳು ಸಂಹವನ ಮಾಡಲು ಬಳಸುವ ತಂತ್ರಜ್ಞಾನಕ್ಕೂ ಒಂದು ವಿಚಿತ್ರ ಸಂಬಂಧವಿದೆ.

ಜೇ. ಸಿ. ಬೋಸ್ (source: www.jcbose.ac.in)

ವಿದ್ಯುತ್ಕಾಂತೀಯ ಅಲೆಗಳು
ನಮ್ಮ ಮೊಬೈಲ್ ಫೋನ್‌ಗಳು ಸಂಹವನ ಮಾಡಲು, ಅಂದರೆ ಧ್ವನಿ ಅಥವ ಸಂದೇಶಗಳನ್ನು ರವಾನಿಸಲು ರೇಡಿಯೋ ತರಂಗಗಳನ್ನು (ವಿದ್ಯುತ್ಕಾಂತೀಯ ವಿಕಿರಣ) ಬಳಸುತ್ತವೆ. ಯಾವುದೇ ತಂತಿಗಳನ್ನು ಬಳಸದೆ ಸಂಕೇತಗಳನ್ನು ಕಳುಹಿಸುವ ತಂತ್ರಜ್ಞಾನದ ಬಗ್ಗೆ ಸುಮಾರು ಒಂದೂವರೆ ಶತಮಾನದ ಹಿಂದೆಯೇ ಅಂದಿನ ವಿಜ್ಞಾನಿಗಳು ಕಲ್ಪನೆ ಮಾಡಿದ್ದರು. ಆದರೆ ಇದರ ಕುರಿತು ಸಂಶೋಧನೆ ಪ್ರಾರಂಭವಾದದ್ದು ಜೇಮ್ಸ್ ಕ್ಲರ್ಕ್-ಮ್ಯಾಕ್ಸ್ವೆಲ್ ಎಂಬ ಗಣಿತಜ್ಞನಿಂದಾಗಿ. ಮ್ಯಾಕ್ಸ್ವೆಲ್ ವಿದ್ಯುಚ್ಚಕ್ತಿ ಮತ್ತು ಕಾಂತೀಯತೆಯನ್ನು ಬೇರೆಯೇ ದೃಷ್ಟಿಕೋನದಿಂದ ನೋಡಿದವನು. 1861 ರಿಂದ 1864ನೇ ಇಸವಿಯವರೆಗೆ ಮ್ಯಾಕ್ಸ್ವೆಲ್ ಒಂದಷ್ಟು ಗಣಿತ ಸೂತ್ರಗಳನ್ನು ಪ್ರಕಟಿಸುತ್ತಾನೆ. ಗಣಿತೀಯವಾಗಿ  ಅವನು ಆ ಸೂತ್ರಗಳಲ್ಲಿ, ವಿದ್ಯುಚ್ಚಕ್ತಿ ಮತ್ತು ಕಾಂತೀಯತೆಗೆ ಒಂದು ರೀತಿಯ ಸಂಬಂಧವಿದ್ದು, ಅವು ತರಂಗದಂತೆ ಕಾಣುತ್ತವೆ ಎಂದು ತೋರಿಸುತ್ತಾನೆ. ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಿಸುತ್ತಾ ಇದ್ದಾಗ, ಅವು ತರಂಗಗಳನ್ನು ಸೃಷ್ಟಿಸುತ್ತವೆ ಎಂದು ಅವನ ಸೂತ್ರಗಳು ಸೂಚಿಸುತ್ತಿತ್ತು. ಅವನು ಇದನ್ನು ತೋರ್ಪಡಿಸಲು ಬಳಸಿದ ಗಣಿತ ಎಷ್ಟು ಕ್ಲಿಷ್ಟವಾಗಿತ್ತೆಂದರೆ, ಆಗ ಕೆಲವೇ ಜನರಿಗೆ ಅದು ಸರಿಯಾಗಿ ಅರ್ಥವಾಗಿತ್ತು.


ಈ ಸೂತ್ರಗಳಿಂದ ಪ್ರೇರಿತನಾದ ಜರ್ಮನೀ ದೇಶದ ಹೈನ್ರಿಚ್ ಹರ್ಟ್ಜ್ ಎಂಬ ಯುವ ಭೌತವಿಜ್ಞಾನಿಯು, ಮ್ಯಾಕ್ಸ್ವೆಲ್‌ನ ಸೂತ್ರಗಳನ್ನು ಸಾಬೀತುಪಡಿಸಲು ಪ್ರಯೋಗಗಳನ್ನು ಪ್ರಾರಂಭಿಸುತ್ತಾನೆ. ಅದೇ ಸಮಯದಲ್ಲಿ ಇಂಗ್ಲೆಂಡ್ ದೇಶದಲ್ಲಿ, ಆಲಿವರ್ ಲಾಡ್ಜ್ ಎಂಬ ಭೌತಶಾಸ್ತ್ರದ ಪ್ರೊಫೆಸರ್ ಮಿಂಚಿನಿಂದ  ರಕ್ಷಣೆ ನೀಡುವಂತ ಉಪಕರಣವೊಂದರ ಬಗ್ಗೆ ಪ್ರಯೋಗಗಳನ್ನು ರೂಪಿಸಿದ್ದರು. ಈ ಪ್ರಯೋಗ ನಡೆಸುತ್ತಿದ್ದಾಗ, ಆಕಸ್ಮಿಕವಾಗಿ ಮ್ಯಾಕ್ಸ್ವೆಲ್‌ನ ತರಂಗಗಳನ್ನು ಕಂಡುಹಿಡಿಯುತ್ತಾರೆ. ಈ ಅದ್ಭುತ ಅನ್ವೇಷಣೆಯ ಬಗ್ಗೆ ಜಗತ್ತಿಗೆ ತಿಳಿಸುವ ಮೊದಲು ಒಂದು ಪ್ರವಾಸಕ್ಕೆ ಹೋಗಬೇಕು ಎಂದು ಲಾಡ್ಜ್ ನಿರ್ಧರಿಸುತ್ತಾರೆ. ಪ್ರವಾಸದಿಂದ ಹಿಂತಿರುಗಿ ಬಂದು ತನ್ನ ಸಂಶೋಧನೆಯ ಬಗ್ಗೆ ಎಲ್ಲರಿಗೂ ಹೇಳಬಹುದು ಎಂಬುದು ಅವರ ಯೋಚನೆಯಾಗಿತ್ತು. ಆದರೆ ಲಾಡ್ಜ್ ಪ್ರವಾಸದಿಂದ ಹಿಂತಿರುಗಿ ಬರುವ ಹೊತ್ತಿಗೆ ಹರ್ಟ್ಜ್ ತನ್ನ ಪ್ರಯೋಗಗಳಲ್ಲಿ ಯಶಸ್ವಿಯಾಗಿ ಆಗಲೇ ಅದನ್ನು ಪ್ರಕಟಿಸಿರುತ್ತಾನೆ. ಮ್ಯಾಕ್ಸ್ವೆಲ್‌ನ ಸೂತ್ರಗಳು ಸೂಚಿಸಿದ್ದ ವಿದ್ಯುತ್ಕಾಂತೀಯ ಅಲೆಗಳನ್ನು ಕಂಡುಹಿಡಿದ ಮೊದಲಿಗನೆಂಬ ಶ್ರೇಯಸ್ಸು ಹರ್ಟ್ಜ್ ನ ಪಾಲಾಯಿತು.

ಹರ್ಟ್ಜ್ ವಿದ್ಯುತ್ಕಾಂತೀಯ ಅಲೆಗಳನ್ನು ಕಂಡುಹಿಡಿದ ಉಪಕರಣ (source: www.wired.com)

ವಯರ್ಲೆಸ್
ಆಲಿವರ್ ಲಾಡ್ಜ್ ವಿದ್ಯುತ್ಕಾಂತತ್ವದ ಬಗ್ಗೆ ಸಂಶೋಧನೆ ಮುಂದುವರಿಸುತ್ತಾರೆ. 1894ನೇ ಇಸವಿಯಲ್ಲಿ ಲಾಡ್ಜ್ ಒಂದು ಉಪಕರಣವನ್ನು ರಚಿಸುತ್ತಾರೆ. ಒಂದು ಕಡೆಯಿಂದ ಆ ಉಪಕರಣದ ಸ್ವಿಚ್ ಒತ್ತಿದಾಗ, ತುಸು ದೂರದಲ್ಲಿ ಇನ್ನೊಂದು ಕಡೆ ಒಂದು ಗಂಟೆ ಬಾರಿಸುತ್ತಿತ್ತು. ನೋಡಲು ಆಗಿನ ಟೆಲಿಗ್ರಾಫ್ ಸಿಸ್ಟಮ್ ತರಹ ಕಾಣುತ್ತಿತ್ತು, ಆದರೆ ಅವುಗಳ ನಡುವೆ ಯಾವುದೇ ತಂತಿಗಳಿರಲಿಲ್ಲ. ಜಗತ್ತಿನಲ್ಲೇ ಮೊದಲ ಬಾರಿ ತಂತಿಗಳಿಲ್ಲದೆ ಸಂಕೇತಗಳನ್ನು ಕಳುಹಿಸಬಹುದೆಂದು ಲಾಡ್ಜ್ ಸಾಧಿಸಿ ತೋರಿಸಿದ್ದರು. ಲಾಡ್ಜ್ ಈ ಸಾಧನೆಯನ್ನು ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದರು.

ಆಲಿವರ್ ಲಾಡ್ಜ್ (source: www.wikipedia.org)

ಹರ್ಟ್ಜ್ ಮತ್ತು ಲಾಡ್ಜ್ ರವರ ಪ್ರಯೋಗಗಳ ಬಗ್ಗೆ ಓದಿ, ಇಟೆಲಿ ದೇಶದ ಗುಎಲ್ಮೋ ಮಾರ್ಕೋನಿ ಎಂಬ 20 ವರ್ಷ ವಯಸ್ಸಿನ ಯುವಕನು ಪ್ರಭಾವಿತನಾಗಿ, ತಾನೂ ಇವುಗಳ ಕುರಿತು ಪ್ರಯೋಗಳನ್ನು ಮಾಡಬೇಕೆಂದು ನಿರ್ಧರಿಸಿದನು. ಮಾರ್ಕೋನಿ ಚತುರ, ಮತ್ತು ಉತ್ತಮ ಸಂಪರ್ಕಗಳನ್ನು ಹೊಂದಿದ್ದನು. ಅವನು ಒಬ್ಬ ವಿಜ್ಞಾನಿಯಂತಹ ಶಿಕ್ಷಣ ಪಡೆಯದಿದ್ದರೂ, ಇತರ ವಿಜ್ಞಾನಿಗಳ ಪ್ರಯೋಗಗಳು, ಅವುಗಳ ಫಲಿತಾಂಶಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಜಾಣನಾಗಿದ್ದ. ಅಂದಿನ ವಿಜ್ಞಾನಿಗಳು ಸೈದ್ದಾಂತಿಕವಾಗಿ ವಿದ್ಯುತ್ಕಾಂತೀಯ ಅಲೆಗಳು ಬಹಳ ದೂರ ಚಲಿಸಲು ಸಾಧ್ಯವೇ ಇಲ್ಲ ಎಂಬ ನಿಲುವು ಹೊಂದಿದ್ದರು. ಆದರೆ ಮಾರ್ಕೋನಿಗೆ ವೈಜ್ಞಾನಿಕ ಶಿಕ್ಷಣ ಇಲ್ಲದ ಕಾರಣ ಈ ಸೈದ್ಧಾಂತಿಕ ಅಡೆತಡೆಗಳಿರಲಿಲ್ಲ; ಈ ಅಲೆಗಳು ದೂರ ಚಲಿಸಬಹುದೆಂದು ಕನಸು ಕಂಡನು. ಲಾಡ್ಜ್ ರೂಪಿಸಿದ್ದ ಟ್ರ್ಯಾನ್ಸ್ಮಿಟರ್-ರಿಸೀವರ್ ಉಪಕರಣವನ್ನು ಇನ್ನಷ್ಟೂ ಅಭಿವೃದ್ಧಿ ಪಡಿಸಿ ಮಾರ್ಕೋನಿಯು ರೇಡಿಯೋ ತರಂಗಗಳು ಬಹಳ ದೂರ ಚಲಿಸುವಂತೆ ಮಾಡಿದನು. ಮಾರ್ಕೋನಿಯು ಈ ಉಪಕರಣವನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ನೋಡಿದನು – ಅವುಗಳನ್ನು ಹಡಗುಗಳಲ್ಲಿ ಸಂಹವನಕ್ಕಾಗಿ ಬಳಸಬಹುದು ಎಂಬ ಕಲ್ಪನೆಯಿಂದ ಅದನ್ನು ಅಭಿವೃದ್ಧಿ ಪಡಿಸಿದ್ದನು. ಆದರೆ ಅವನಿಗೆ ತನ್ನ ತಾಯ್ನಾಡಾದ ಇಟೆಲಿಯಲ್ಲಿ ಅಷ್ಟೇನು ಬೆಂಬಲ ಸಿಗಲಿಲ್ಲ. ಹಾಗಾಗಿ ತನ್ನ ಅಮ್ಮನಿಂದ ಸಹಾಯ ಪಡೆದು ಅವನು ಇಂಗ್ಲೆಂಡಿಗೆ ಹೋಗುತ್ತಾನೆ.

ಗುಎಲ್ಮೋ ಮಾರ್ಕೋನಿ (source: www.wikipedia.org)

ಲಾಡ್ಜ್ ರೂಪಿಸಿದ್ದ ಉಪಕರಣವನ್ನು ನೋಡಿ, ಮಾರ್ಕೋನಿಯಂತೆ ಇತ್ತ ಭಾರತದಲ್ಲಿ ಜೇ. ಸಿ. ಬೋಸ್ ಕೂಡ ಪ್ರಭಾವಿತರಾದರು. ಅವರೂ ಅದರ ಕುರಿತು ಸಂಶೋಧನೆಯಲ್ಲಿ ತೊಡಗಿದರು. ಲಾಡ್ಜ್ ತನ್ನ ರಿಸೀವರ್‌ನಲ್ಲಿ ಲೋಹದ ರಜಗಳನ್ನು ಬಳಸಿದ್ದರು, ಆದರೆ ಭಾರತದ ಉಷ್ಣ ಹವಾಮಾನದಿಂದಾಗಿ ಆ ರಜಗಳು ಒಂದಕ್ಕೊಂಡು ಅಂಟಿಕೊಳ್ಳುತ್ತಿದ್ದವು. ಈ ಸಮಸ್ಯೆಯನ್ನು ಪರಿಹರಿಸಲು, ಜೇ. ಸಿ. ಬೋಸ್ ರಜಗಳ ಬದಲಾಗಿ ಸುರುಳಿ ತಂತಿಯನ್ನು ಬಳಸಿದರು. ಜೇ. ಸಿ. ಬೋಸ್‌ರವರ ಈ ಆವಿಷ್ಕಾರವು ವೈಜ್ಞಾನಿಕ ಸಮುದಾಯದಲ್ಲಿ ಸಂಚಲನ ಸೃಷ್ಟಿಸಿತು; ಸಮುದ್ರದ ವಾತಾವರಣದಲ್ಲಿ ಇವು ಚೆನ್ನಾಗಿ ಕೆಲಸ ಮಾಡಬಹುದು, ಹಾಗಾಗಿ ಬ್ರಿಟಿಷ್ ನೌಕೆಯ ಹಡಗುಗಳ ನಡುವಿನ ಸಂವಹನಕ್ಕಾಗಿ ಉಪಯೋಗವಾಗುತ್ತವೆ ಎಂಬ ಅಭಿಪ್ರಾಯವಿತ್ತು. ಆದರೆ ಜೇ. ಸಿ. ಬೋಸ್‌ರಿಗೆ ಅದರ ಬಗ್ಗೆ ಬರೀ ವೈಜ್ಞಾನಿಕ ಆಸಕ್ತಿ ಇತ್ತೇ ಹೊರತು ಯಾವುದೇ ಲಾಭ ಮಾಡುವ ಉದ್ದೇಶವಿರಲಿಲ್ಲ.

ಮಾರ್ಕೋನಿಯ ಉದ್ದೇಶ  
ಮಾರ್ಕೋನಿಯ ಉದ್ದೇಶ ಬೇರೆಯೇ ಇತ್ತು. ತನ್ನ ಸಂಪರ್ಕಗಳ ಮೂಲಕ, ಮಾರ್ಕೋನಿಯು ಬ್ರಿಟಿಷ್ ಅಂಚೆ ಇಲಾಖೆಯ ಪ್ರಧಾನ ಇಂಜಿನಿಯರ್ ವಿಲಿಯಮ್ ಪ್ರೀಸ್ ಎಂಬವರನ್ನು ಭೇಟಿಯಾಗುತ್ತಾನೆ. ಪ್ರೀಸ್ ಮಾರ್ಕೋನಿಗೆ ಸಹಾಯ ಮಾಡಲು ಒಪ್ಪುತ್ತಾರೆ. ಪ್ರೀಸ್ ಮತ್ತು ಅವರ ತಂಡದ ಸಹಾಯದಿಂದ, ಮಾರ್ಕೋನಿಯು ತನ್ನ ಉಪಕರಣವನ್ನು ಉತ್ತಮಗೊಳಿಸುತ್ತಾನೆ. ಪ್ರೀಸ್ ಮತ್ತು ಮಾರ್ಕೋನಿ ಇಬ್ಬರೂ ಸೇರಿ ಇಂಗ್ಲೆಂಡ್ ದೇಶವಿಡೀ ಸುತ್ತಾಡಿ ಅಲ್ಲಿನ ಪ್ರಭಾವಶಾಲಿ ವ್ಯಕ್ತಿಗಳೆಲ್ಲರ ಮುಂದೆ ಅವರ ಈ ವಯರ್ಲೆಸ್ ಟೆಲಿಗ್ರಾಫಿ  ಉಪಕರಣವನ್ನು ಪ್ರದರ್ಶಿಸುತ್ತಾರೆ.  ಆದರೆ ಮಾರ್ಕೋನಿ ಕುತಂತ್ರಿಯಾಗಿದ್ದನು. ಪ್ರೀಸ್‌ನ ಬೆನ್ನ ಹಿಂದೆ ಹೋಗಿ, ಮಾರ್ಕೋನಿಯು ವಯರ್ಲೆಸ್ ಟೆಲಿಗ್ರಾಫಿ ಪೇಟೆಂಟಿಗಾಗಿ ಅರ್ಜಿ ಹಾಕಿದ್ದನು (ಪೇಟೆಂಟ್ ಎಂದರೆ ಒಂದು ಆವಿಷ್ಕಾರದ ಮೇಲಿರುವ ಪರವಾನಗಿ – ಒಂದಿಷ್ಟು ವರ್ಷಗಳ ಕಾಲ, ಕೇವಲ ಆ ಪೇಟೆಂಟಿನಲ್ಲಿ ಹೆಸರಿದ್ದವರು ಮಾತ್ರ ಆ ಆವಿಷ್ಕಾರವನ್ನು ಬಳಸುವ ಹಕ್ಕು ಹೊಂದಿರುತ್ತಾರೆ). 1897ನೇ ಇಸವಿಯಲ್ಲಿ ಮಾರ್ಕೋನಿಗೆ ಅವನದೇ ಹೆಸರಿನಲ್ಲಿ ಪೇಟೆಂಟ್ ದೊರೆಯುತ್ತದೆ. ಮಾರ್ಕೋನಿಯು ಅದೇ ವರ್ಷ ವಯರ್ಲೆಸ್ ಟೆಲಿಗ್ರಾಫ್ ಆಂಡ್ ಸಿಗ್ನಲ್ ಕಂಪೆನಿ ಸ್ಥಾಪಿಸುತ್ತಾನೆ (1900ನೇ ಇಸವಿಯಲ್ಲಿ ಮಾರ್ಕೋನೀ’ಸ್ ವಯರ್ಲೆಸ್ ಟೆಲಿಗ್ರಾಫ್ ಕಂಪೆನಿ ಎಂದು ಮರುನಾಮಕರಣವಾಗುತ್ತದೆ). ಮಾರ್ಕೋನಿಯ ದ್ರೋಹದ ವಿಷಯ ತಿಳಿದ ಪ್ರೀಸ್‌ಗೆ ಬೇಸರವಾಗುತ್ತದೆ.  ವೈಜ್ಞಾನಿಕ ಸಮುದಾಯಕ್ಕೆ ಸಿಡಿಲು ಬಡಿದಂತಾಗಿತ್ತು. ಲಾಡ್ಜ್ ಮತ್ತು ಇನ್ನಿತರ ವಿಜ್ಞಾನಿಗಳು ಸಣ್ಣ ಪುಟ್ಟ ಆವಿಷ್ಕಾರಗಳೆಲ್ಲದಕ್ಕೂ ಪೇಟೆಂಟ್ ಅರ್ಜಿಗಳನ್ನು ಹಾಕಲು ಪ್ರಾರಂಭಿಸುತ್ತಾರೆ. ಪೇಟೆಂಟಿನ ಹುಚ್ಚು ಎಲ್ಲಾ ಕಡೆ ಹರಡುತ್ತದೆ. ಇತ್ತ ಮಾರ್ಕೋನಿಯೂ ಪೇಟೆಂಟಿಗಾಗಿ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸುವುದಿಲ್ಲ. ಅಮೆರಿಕಾ ದೇಶದಲ್ಲಿಯೂ ಅರ್ಜಿ ಹಾಕುತ್ತಾನೆ. ಮೊದಲ ಕೆಲವು ಬಾರಿ ಅವನ ಪ್ರಯತ್ನಗಳು ವಿಫಲವಾದರೂ, ಅವನಿಗೆ ವಯರ್ಲೆಸ್ ಸಂಹವನದ ಅನ್ವೇಷಣೆಗಳಿಗಾಗಿ ಅಮೆರಿಕಾದಲ್ಲಿಯೂ ಪೇಟೆಂಟ್‌ಗಳು ಸಿಗುತ್ತವೆ.

ಜೇ. ಸಿ. ಬೋಸ್‌ರವರು ಆಗಸ್ಟ್ 1901ರಲ್ಲಿ ಲಂಡನಿಗೆ ಹೋಗುತ್ತಾರೆ. ಸುಮಾರು ಎರಡು ವರ್ಷಗಳ ಕಾಲ ಸಪ್ಟೆಂಬರ್ 1902ರ ತನಕ ಅಲ್ಲಿನ ರಾಯಲ್ ಇನ್ಸ್ಟಿಟ್ಯೂಷನಿನಲ್ಲಿ ಸಂಶೋಧಕರಾಗಿ ಕೆಲಸ ಮಾಡುತ್ತಾರೆ. ಲಂಡನಿನಲ್ಲಿ ಪೇಟೆಂಟಿನ ಬಗೆಗಿರುವ ಹುಚ್ಚು ನೋಡಿ ಅವರಿಗೆ ದಿಗ್ಬ್ರಮೆಯಾಗುತ್ತದೆ. 1901ನ ಮೇ ತಿಂಗಳ 17ನೇ ತಾರೀಖಿನಂದು ರಾಯಲ್ ಇನ್ಸ್ಟಿಟ್ಯೂಷನಿನಲ್ಲಿ ಜೇ. ಸಿ. ಬೋಸ್‌ರವರ ಒಂದು ಉಪನ್ಯಾಸ ಏರ್ಪಾಡಾಗಿತ್ತು. ಅಂದು ಉಪನ್ಯಾಸ ಶುರುವಾಗುವ ಸ್ವಲ್ಪ ಸಮಯದ ಮೊದಲು, ಒಬ್ಬ ಲಕ್ಞಾಧಿಪತಿ ಜೇ. ಸಿ. ಬೋಸ್‌ರವರ ಮನೆಗೆ ಆಗಮಿಸುತ್ತಾರೆ. ಉಪನ್ಯಾಸದಲ್ಲಿ ಹೇಳಬೇಕೆಂದಿದ್ದ ಸಂಶೋಧನೆಯ ಫಲಿತಾಂಶಗಳನ್ನು ಗುಟ್ಟಾಗಿಡಬೇಕೆಂದು ಜೇ. ಸಿ. ಬೋಸ್‌ರವರಲ್ಲಿ ಮನವಿ ಮಾಡುತ್ತಾರೆ. ಆ ಸಂಶೋಧನೆಯಿಂದ ಸಾಕಷ್ಟು ಹಣಗಳಿಸಬಹುದು, ಬಂದ ಲಾಭವನ್ನು 50:50ರ ಹಾಗೆ ಹಂಚಿಕೊಳ್ಳೋಣ ಎಂದು ಪ್ರಸ್ತಾಪಿಸುತ್ತಾರೆ. ಹೀಗೆ ಪ್ರಸ್ತಾಪ ಇಟ್ಟ ಈ ಲಕ್ಞಾಧಿಪತಿಯ ಹೆಸರು ಮೇಜರ್ ಸ್ಟೀಫನ್ ಫ್ಲಡ್ ಎಂದು – ಅವರು ಮಾರ್ಕೋನೀ’ಸ್ ವಯರ್ಲೆಸ್ ಟೆಲಿಗ್ರಾಫ್ ಕಂಪೆನಿಯ ಮ್ಯಾನೆಜಿಂಗ್ ಡೈರೆಕ್ಟರ್ ಆಗಿದ್ದರು. ಆದರೆ ಜೇ. ಸಿ. ಬೋಸ್‌ರವರು ಅವರನ್ನು ನಿರಾಕರಿಸುತ್ತಾರೆ. ಇಂತಹ ಲಾಭದ ದುರಾಸೆಯನ್ನು ನೋಡಿ ಜಿಗುಪ್ಸೆಗೊಂಡ ಜೇ. ಸಿ. ಬೋಸ್ ತಮ್ಮ ಸ್ನೇಹಿತ ಶ್ರೀ ರವೀಂದ್ರನಾಥ ಠಾಗೋರರಿಗೆ ಬರೆದ ಪತ್ರದಲ್ಲಿ ಹಿಂದೆ ಹೇಳಿದ ಸಾಲುಗಳನ್ನು ಬರೆಯುತ್ತಾರೆ. ಅಂದು ನೀಡಿದ ಉಪನ್ಯಾಸದಲ್ಲಿ ಹೇಳಬೇಕೆಂದಿದ್ದನ್ನೆಲ್ಲಾ ಜೇ. ಸಿ ಬೋಸ್ ಹೇಳುತ್ತಾರೆ. ಯಾವುದನ್ನೂ ಗುಟ್ಟಾಗಿಡುವುದಿಲ್ಲ. ಅವರಿಗೆ ಅವರ ಸಂಶೋಧನೆಯಿಂದ ಲಾಭ ಪಡೆಯುವ ಉದ್ದೇಶವಿರಲಿಲ್ಲ.

ಬೋಸ್ ಆವಿಷ್ಕರಿಸಿದ “mercury coherer with a telephone” ಎಂಬ ಉಪಕರಣದ ಬಗ್ಗೆ ಅವರು ಏಪ್ರಿಲ್ 1899ರಲ್ಲಿ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸುತ್ತಾರೆ. ಇದನ್ನು ಮಾರ್ಕೋನಿಯು, ಸ್ನೇಹಿತ ಲುಯಿಗಿ ಸೊಲಾರಿ ಎಂಬವನ ಸಹಾಯ ಪಡೆದು, ಅದರಲ್ಲಿ ಬದಲಾವಣೆಗಳನ್ನು ಮಾಡಿ, ತನ್ನ ವಯರ್ಲೆಸ್ ಟೆಲಿಗ್ರಾಫ್ ಉಪಕರಣದಲ್ಲಿ ರಿಸೀವರ್ ಆಗಿ ಅಳವಡಿಸುತ್ತಾನೆ. ಅದನ್ನು “italian navy coherer“ ಎಂದು ಕರೆಯುತ್ತಾನೆ. ಅದಕ್ಕಾಗಿ ಅವನಿಗೆ ಪೇಟೆಂಟ್ ಕೂಡ ಸಿಗುತ್ತದೆ. ಹಾಗೆಯೇ ಅಮೆರಿಕಾ ದೇಶದ ವಿಜ್ಞಾನಿಯಾದ ನಿಕೊಲಾಸ್ ಟೆಸ್ಲಾನ ಸಂಶೋಧನೆಗಳನ್ನು ಕೂಡ ಉಪಯೋಗಿಸಿ, ತನ್ನ ಉಪಕರಣವನ್ನು ಉತ್ತಮಗೊಳಿಸುತ್ತಾನೆ. ಟೆಸ್ಲಾ ಇದರ ಕುರಿತಾಗಿ “ಮಾರ್ಕೋನಿ ಒಳ್ಳೆಯ ಮನುಷ್ಯ. ಅವನು ಮುಂದುವರಿಯಲಿ.  ಅವನು ನನ್ನ 17 ಪೇಟೆಂಟ್‌ಗಳನ್ನು ಬಳಸುತ್ತಿದ್ದಾನೆ” ಎಂದು ಹೇಳುತ್ತಾನೆ. 1909ನೇ ಇಸವಿಯಲ್ಲಿ ವಯರ್ಲೆಸ್ ಟೆಲಿಗ್ರಾಫಿ ತಂತ್ರಜ್ಞಾನಕ್ಕಾಗಿ ನೀಡಿದ ಕೊಡುಗೆಗಾಗಿ, ಮಾರ್ಕೋನಿಯು, ಕಾರ್ಲ್ ಫರ್ಡಿನೆಂಡ್ ಬ್ರಾನ್ ಎಂಬ ವಿಜ್ಞಾನಿಯ ಜೊತೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನೂ ಪಡೆಯುತ್ತಾನೆ. ಮಾರ್ಕೋನಿಯ ವ್ಯಾಪಾರಿ ಮುನ್ನೋಟದಿಂದಾಗಿ, ಅವನು ಇತರ ವಿಜ್ಞಾನಿಗಳ ಸಂಶೋಧನೆಗಳನ್ನು ಅರ್ಥೈಸಿಕೊಂಡು, ಅದನ್ನು ಉತ್ತಮಗೊಳಿಸಿ, ಬಹುದೂರ ತಲುಪುವಂತಹ ರೇಡಿಯೋ ತಂತ್ರಜ್ಞಾನವನ್ನು  ರೂಪಿಸಿದನು. ರೇಡಿಯೋ ಪಿತಾಮಹ ಎಂದೆನಿಸಿಕೊಂಡನು. ಲಾಡ್ಜ್, ಬೋಸ್ ಮತ್ತು ಇನ್ನೂ ಹಲವು ವಿಜ್ಞಾನಿಗಳು ಎಲೆ ಮರೆ ಕಾಯಿಯಾಗಿಯೇ ಉಳಿದರು.

%d bloggers like this: