ಲಸಿಕೆ ವಿರೋಧಿ ನಂಬಿಕೆಗಳು

ಕೊರೊನಾ ಪಿಡುಗಿನ ಈ ಕಾಲದಲ್ಲಿ, ಔಷದೀಯ ಕಂಪೆನಿಗಳು, ರಿಸರ್ಚ್ ಲ್ಯಾಬ್ ಗಳು ಲಸಿಕೆ ಕಂಡುಹಿಡಿಯಲು ಒದ್ದಾಡುತ್ತಿರುವಾಗ, ಲಸಿಕೆಗಳನ್ನು ವಿರೋಧಿಸುವ ಜನರೂ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ . ಲಸಿಕೆ ವಿರೋಧಿ ನಂಬಿಕೆಗಳು ಹೊಸತೇನಲ್ಲ, ಮೊದಲ ಲಸಿಕೆ ಅನ್ವೇಷಣೆಯಾದ  ದಿನದಿಂದಲೂ ಇವೆ. ಆದರೆ ಸುಮಾರು ಒಂದೆರಡು ದಶಕಗಳಿಂದ ಲಸಿಕೆಗಳ ಬಗ್ಗೆ ವಿರೋಧ ಹೆಚ್ಚುತ್ತಿದ್ದು, ವಿಶೇಷವಾಗಿ ಎಂಎಂಆರ್ (ದಡಾರ, ಕೆಪ್ಪಟೆ ಮತ್ತು ರುಬೆಲ್ಲಾ ರೋಗಗಳಿಗೆ ನೀಡುವ ಲಸಿಕೆ) ಲಸಿಕೆಯ ಕುರಿತು ಪಾಶ್ಚಾತ್ಯ ದೇಶಗಳಲ್ಲಿ ಅಪನಂಬಿಕೆ ಮತ್ತು ವಿರೋಧ  ಹೆಚ್ಚಾಗಿದೆ. ಮುಂದೆ ಕೊರೊನಾ ಲಸಿಕೆಯ ಕುರಿತು ಅಪನಂಬಿಕೆ ಹರಡುವ ಸಾಧ್ಯತೆಯೂ ಇದೆ.

ಎಡ್ವರ್ಡ್ ಜೆನ್ನರ್ ಎಂಬ ಸಂಶೋಧಕ ಮೊಟ್ಟ ಮೊದಲ ಸಣ್ಣ ಸಿಡುಬಿನ ಲಸಿಕೆಯನ್ನು 1798ನೇ ಇಸವಿಯಲ್ಲಿ ಕಂಡುಹಿಡಿದನೆಂದು ನಾವು ಪಠ್ಯಪುಸ್ತಕಗಳಲ್ಲಿ ಓದಿದ್ದೇವೆ. ದನಗಳ ಜೊತೆ ಕೆಲಸ  ಮಾಡುವವರಿಗೆ , ದನಗಳಿಗೆ ಬರುವ ಕೌಪಾಕ್ಸ್ (ದನ ಸಿಡುಬು) ಎಂಬ ರೋಗ ತಗುಲಿ ಗುಣವಾದರೆ, ಮುಂದೆ  ಅವರಿಗೆ ಸಣ್ಣ ಸಿಡುಬು ಬರದೇ ಇರುವುದನ್ನು ಜೆನ್ನರ್ ಗಮನಿಸುತ್ತಾನೆ. ಮಿತ ರೋಗಲಕ್ಷಣಗಳಿರುವ ಈ ಕೌಪಾಕ್ಸ್ ಖಾಯಿಲೆಯು ಸಣ್ಣ ಸಿಡುಬಿನ ವಿರುದ್ಧ ಪ್ರತಿರೋಧ ಶಕ್ತಿ ನೀಡಬಹುದು ಎಂಬ ನಂಬಿಕೆಯಿಂದ ತನ್ನ ಪ್ರಯೋಗಗಳನ್ನು ಪ್ರಾರಂಭಿಸುತ್ತಾನೆ. ಮೊದಲ ಪ್ರಯೋಗ ಜೇಮ್ಸ್ ಫಿಪ್ಸ್ ಹೆಸರಿನ 8 ವರ್ಷದ ಬಾಲಕನ ಮೇಲೆ! ಕೌಪಾಕ್ಸ್ ರೋಗವಿರುವ ಒಬ್ಬ ಮಹಿಳೆಯ ಚರ್ಮದ ಮೇಲಿನ ಗುಳ್ಳೆಯ ದ್ರವ್ಯವನ್ನು ಈ ಬಾಲಕನಿಗೆ ಚುಚ್ಚುತ್ತಾನೆ. ಮೊದಲ 8 ದಿನ ಸ್ವಲ್ಪ ಜ್ವರ ಹಾಗೂ ಅಸೌಖ್ಯ ಕಂಡುಬಂದರೂ ಆತ ಗುಣಮುಖನಾಗುತ್ತಾನೆ. ನಂತರ 9ನೇ ದಿನ ಜೆನ್ನರ್ ಆ ಬಾಲಕನಿಗೆ ಸಣ್ಣ ಸಿಡುಬು ರೋಗದ ದ್ರವ್ಯವನ್ನೇ ಚುಚ್ಚುತ್ತಾನೆ! ಆದರೆ ಆ ಬಾಲಕನಲ್ಲಿ ಸಣ್ಣ ಸಿಡುಬಿನ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಅವನ ದೇಹದಲ್ಲಿ ಸಣ್ಣ ಸಿಡುಬಿನ ವಿರುದ್ಧ ರೋಗನಿರೋಧಕ ಶಕ್ತಿ ಬಂದಿತ್ತು.

ಜೆನ್ನರ್ ಮಾಡಿದಂತಹ ಈ ಪ್ರಕ್ರಿಯೆ, ಅಂದರೆ ರೋಗದ ದ್ರವ್ಯವನ್ನೇ ದೇಹಕ್ಕೆ ಚುಚ್ಚುವುದನ್ನು ಇನಾಕುಲೇಶನ್ ಎನ್ನುತ್ತೇವೆ. ಇದರ ಕುರಿತು ಸಂಶೋಧನೆ ನಡೆಸಿ ಪ್ರತಿರೋಧಶಾಸ್ತ್ರಕ್ಕೆ ಬುನಾದಿ ಕಟ್ಟಿದವನು ಜೆನ್ನರ್, ಆದರೆ ಆತ ಇನಾಕುಲೇಶನ್ ಮಾಡಿದ ಮೊದಲಿಗನಲ್ಲ. ಈ ಪದ್ಧತಿಯು ಬಹಳ ಹಿಂದಿನಿಂದ ಚೀನಾ ಮತ್ತು ಆಫ್ರೀಕಾದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಭಾರತದಲ್ಲಿಯೂ ಕೆಲವೆಡೆ ಇನಾಕುಲೇಶನ್ ಪದ್ಧತಿ ಇತ್ತೆಂದು ಭಾರತಕ್ಕೆ ಭೇಟಿ ನೀಡಿದ್ದ ಕೆಲವು ಬ್ರಿಟಿಷ್ ವೈದ್ಯರು ಬರೆದಿದ್ದಾರೆ. ಇನಾಕುಲೇಶನ್ ಪದ್ಧತಿಯು ಯುರೋಪ್ ಖಂಡದಲ್ಲಿ ಸುಮಾರು 1700ರ ಶತಕದ ಆರಂಭದಲ್ಲಿ ಹರಡಿತು.

ಜೆನ್ನರ್ ತನ್ನ ಪ್ರಯೋಗಗಳ ಫಲಿತಾಂಶಗಳನ್ನು ಒಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದನು. ಕೂಡಲೇ ಸಮಾಜದಲ್ಲಿ ಇವನ ಪ್ರಯೋಗಗಳ ಕುರಿತು ವಿರೋಧ ವ್ಯಕ್ತವಾಯಿತು. ದನದ ಖಾಯಿಲೆಯನ್ನು ದೇಹಕ್ಕೆ ಚುಚ್ಚು ವುದು ಜನರಿಗೆ ಅಸಹ್ಯವೆನಿಸಿತು. ಕೆಲವರು ಇದು ದೇವರ ಇಚ್ಛೆಯ ವಿರುದ್ಧ ಎಂದು ಹೇಳಿದರು. ಆದರೆ ಈ ಲಸಿಕೆಯಿಂದಾಗಿ ಸಿಡುಬಿನ ಪ್ರಮಾಣ ಕಡಿಮೆಯಾಯಿತು.ಕ್ರಮೇಣ ಹಲವು ಸರ್ಕಾರಗಳು ಲಸಿಕೆ ಬಳಕೆಯನ್ನು ಸ್ವೀಕರಿಸಿತು. ಬ್ರಿಟನ್ ಮತ್ತು ಅಮೆರಿಕಾ ದೇಶವು ಕಡ್ಡಾಯ ಲಸಿಕೆ ಕಾರ್ಯಕ್ರಮಗಳು ಮತ್ತು ಕಾಯ್ದೆಗಳನ್ನು ಜಾರಿಗೆ ತಂದಿತು. ಇದು ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, ಸರ್ಕಾರ ತನ್ನ ಮಿತಿ ಮೀರುತ್ತಿದೆ ಎಂಬ ಕಾರಣಗಳನ್ನು ನೀಡಿ, ಹಲವು ಲಸಿಕೆ ವಿರೋಧಿ ಚಳುವಳಿಗಳು ಹುಟ್ಟಿದವು.

ಎಡ್ವರ್ಡ್ ಜೆನ್ನರ್ ಲಸಿಕೆ ನೀಡುತ್ತಿರುವ ವ್ಯಂಗ್ಯಚಿತ್ರ, ಜನರ ಮೈಮೇಲೆ ದನ ರೀತಿಯ ಭಾಗಗಳು ಬೆಳೆಯುತ್ತಿರುವುದು - ಜೇಮ್ಸ್ ಗಿಲ್ರೇ
ಎಡ್ವರ್ಡ್ ಜೆನ್ನರ್ ಲಸಿಕೆ ನೀಡುತ್ತಿರುವ ವ್ಯಂಗ್ಯಚಿತ್ರ, ಜನರ ಮೈಮೇಲೆ ದನ ರೀತಿಯ ಭಾಗಗಳು ಬೆಳೆಯುತ್ತಿರುವುದು – ಜೇಮ್ಸ್ ಗಿಲ್ರೇ

ಆದರೆ ಲಸಿಕೆಗಳ ಕುರಿತು ಸಂಶೋಧನೆ ನಿಲ್ಲಲಿಲ್ಲ. 1930-40ರ ಹೊತ್ತಿಗೆ, ಕ್ಷಯ, ಡಿಫ್ತೀರಿಯ, ಧನುರ್ವಾಯು ಮುಂತಾದ ರೋಗಗಳಿಗೂ ಲಸಿಕೆ ಕಂಡುಹಿಡಿದರು. ಲಕ್ಷಾಂತರ ಜನರಿಗೆ ಈ ರೋಗಗಳಿಂದ ರಕ್ಷಣೆ ಸಿಕ್ಕಿದ್ದರೂ, ಲಸಿಕೆ ವಿರೋಧಿ ನಂಬಿಕೆಗಳು, ಚಳುವಳಿಗಳು ಮುಂದುವರೆಯಿತು. 1955ನೇ ಇಸವಿಯಲ್ಲಿ ಕಟ್ಟರ್ ಲ್ಯಾಬರೇಟರೀಸ್ ಎಂಬ ಕಂಪೆನಿಯು ಆಕಸ್ಮಿಕವಾಗಿ ಜೀವಂತ ಪೋಲಿಯೋ ವೈರಾಣುಗಳಿರುವಂತಹ ಲಸಿಕೆಗಳನ್ನು ತಯಾರಿಸಿತು. ಇದರಿಂದಾಗಿ ಸುಮಾರು 40,000 ಜನರಿಗೆ ಪೋಲಿಯೋ ರೋಗ ತಗುಲಿ ನಡೆದಾಡುವ ಶಕ್ತಿ ಕಳೆದುಕೊಂಡರು. ಇಂತಹದ್ದೇ ಘಟನೆಯೊಂದು ನಾಯಿಕೆಮ್ಮು ಲಸಿಕೆಯಿಂದಾಗಿ 1974 ಇಸವಿಯಲ್ಲಿ ನಡೆಯಿತು. ಇಂತಹ ಘಟನೆಗಳಿಂದಾಗಿ ಲಸಿಕೆ ವಿರೋಧಿ ಗುಂಪುಗಳಿಗೆ ಬೆಂಬಲ ಹೆಚ್ಚಾಯಿತು.

ಇತ್ತೀಚಿನ ದಿನಗಳಲ್ಲಿ, ಲಸಿಕೆ ವಿರೋಧಿ ನಂಬಿಕೆಗಳು ಉಲ್ಬಣಗೊಂಡಿರುವುದಕ್ಕೆ ಕಾರಣ 1998ನೇ ಇಸವಿಯಲ್ಲಿ ‘ದಿ ಲ್ಯಾನ್ಸೆಟ್’ ಎಂಬ ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಒಂದು ಲೇಖನ. ಆ ಲೇಖನದಲ್ಲಿ, ಆಂಡ್ರ್ಯೂ ವೇಕ್‍ಫೀಲ್ಡ್ ಎಂಬ ವೈದ್ಯ ಮತ್ತು ಸಂಶೋಧಕ, ಎಂಎಂಆರ್ ಲಸಿಕೆ ಕೊಡುವುದರಿಂದ ಮಕ್ಕಳಲ್ಲಿ ಆಟಿಸಮ್ ಎಂಬ ಮಾನಸಿಕ ಬೆಳವಣಿಗೆಯ ಅಸ್ವಸ್ಥತೆ ಕಾಣುತ್ತಿದೆ ಎಂದು ವಾದಿಸುತ್ತಾನೆ. ಆದರೆ ಅವನು ಅನುಸರಿಸಿದ ಸಂಶೋಧನಾ ವಿಧಾನಗಳು ತಪ್ಪು ಮತ್ತು ಅನೈತಿಕವಾಗಿತ್ತು ಎಂದು ನಂತರ ನಡೆದ ತನಿಖೆಗಳು ಕಂಡುಹಿಡಿದವು. ‘ದಿ ಲ್ಯಾನ್ಸೆಟ್’ ನಿಯತಕಾಲಿಕೆಯು ಆ ಲೇಖನವನ್ನು 2010ನೇ ಇಸವಿಯಲ್ಲಿ ಹಿಂದೆಗೆದುಗೊಂಡಿತು. ಆದರೆ 12 ವರ್ಷಗಳಲ್ಲಿ ಆ ಲೇಖನವು ಸಾಕಷ್ಟು ಹಾನಿ ಮಾಡಿಯಾಗಿತ್ತು. ಆಟಿಸಮ್ ಮತ್ತು ಎಂಎಂಆರ್ ಬಗೆಗಿನ ಈ ಸುಳ್ಳು ಪಾಶ್ಚಾತ್ಯ ಜಗತ್ತಿನ ಹಲವೆಡೆ ಹರಡಿತು. ಈಗಲೂ ಈ ಲೇಖನವನ್ನು ಆಧಾರವಾಗಿಟ್ಟು ಹಲವು ಲಸಿಕೆ ವಿರೋಧಿ ಗುಂಪುಗಳ ವಾದಿಸುತ್ತವೆ. ಇದಲ್ಲದೆ ಪಾದರಸವಿದ್ದ ತೈಮೆರೊಸಾಲ್ ಎಂಬ ಸಂಯುಕ್ತ ವಸ್ತುವನ್ನು ಲಸಿಕೆಗಳು ಕೆಡದಂತೆ ಹಾಕುತ್ತಿದ್ದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ತೈಮೆರೊಸಾಲ್ ಬಳಸಬಾರದೆಂದು ಲಸಿಕೆ ವಿರೋಧಿ ಗುಂಪುಗಳು ವಾದಿಸಿದರು.

ಇಂತಹ ನಂಬಿಕೆಗಳ ಪರಿಣಾಮವಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾ ಖಂಡದಲ್ಲಿ ದಡಾರ ರೋಗವು ಮತ್ತೆ ಕೆಲವೆಡೆ ಸಾಂಕ್ರಾಮಿಕವಾಗಿ ಹಬ್ಬುತ್ತಿದೆ. ದಡಾರ ಕಾಣೆಯಾಗಿದ್ದ ಐರ್ಲ್ಯಾಂಡ್, ಬ್ರಿಟನ್, ಫ್ರಾನ್ಸ್ ನಂತ ಹಲವು ದೇಶಗಳಲ್ಲಿ ಸೋಂಕು ಮತ್ತೆ ತಲೆಯೆತ್ತಿದೆ. ಅಮೆರಿಕಾ ಮತ್ತು ಯುರೋಪ್ ಅಲ್ಲದೇ ಜಗತ್ತಿನ ಇತರ ಕೆಲವು ದೇಶಗಳಲ್ಲಿಯೂ ಲಸಿಕೆ ವಿರೋಧಿ ನಂಬಿಕೆಗಳು ಹುಟ್ಟಿವೆ. 2001ನೇ ಇಸವಿಯಲ್ಲಿ ನೈಜೀರಿಯ ದೇಶದ ಕೆಲ ಧಾರ್ಮಿಕ ಮುಖಂಡರು ಲಸಿಕೆಗಳು ಪಶ್ಚಾತ್ಯ ದೇಶಗಳ ಹುನ್ನಾರವೆಂದೂ ಆದ್ದರಿಂದ ಅವುಗಳನ್ನು ತ್ಯಜಿಸಿ ಎಂದು ತಮ್ಮ ಅನುಯಾಯಿಗಳ ಮನವೋಲಿಸಿದರು. ಹಾಗಾಗಿ ನೈಜೀರಿಯ ದೇಶದಲ್ಲಿ ಮತ್ತೆ ಪೋಲಿಯೋ ಮತ್ತು ದಡಾರ ರೋಗಗಳು ಹರಡಿತು. ಒಸಾಮಾ-ಬಿನ್-ಲಾಡೆನ್ ಬಗ್ಗೆ ತಿಳಿಯಲು ಅಮೆರಿಕಾದ ಗುಪ್ತಚರ ಇಲಾಖೆಯು ನಕಲಿ ಲಸಿಕೆ ಕಾರ್ಯಕ್ರಮವನ್ನು ರೂಪಿಸಿತ್ತು ಎಂಬ ಸುದ್ದಿಯಿಂದಾಗಿ, ಪಾಕಿಸ್ತಾನದ ಹಲವೆಡೆ ಜನರು ತಮ್ಮ ಮಕ್ಕಳಿಗೆ ಲಸಿಕೆಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಪೋಲಿಯೋ ಲಸಿಕೆ ನೀಡಲು ಬಂದಿದ್ದ ವೈದ್ಯಕೀಯ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದ ಘಟನೆಯೂ ನಡೆದಿದೆ. ಭಾರತದಲ್ಲಿಯೂ ಒಂದೆರಡು ಕಡೆ ವಾಟ್ಸ್ಯಾಪ್ ನಲ್ಲಿ ಹರಡಿದ ಸುಳ್ಳು ವದಂತಿಗಳಿಂದಾಗಿ ಲಸಿಕೆ ವಿರೋಧಿ ಧೋರಣೆಗಳು ಕಾಣುತ್ತಿವೆ.

ಲಸಿಕೆ ವಿರೋಧಿ ನಂಬಿಕೆಗಳು ಹೆಚ್ಚಾದರೆ ಜನರ ಆರೋಗ್ಯಕ್ಕೆ ಅಪಾಯವಿದೆ. ಎಲ್ಲರೂ ಲಸಿಕೆ ಚುಚ್ಚಿಸಿಕೊಂಡಾಗ ಸಮುದಾಯದಲ್ಲೇ ಒಂದು ರೀತಿಯ ಪ್ರತಿರೋಧಶಕ್ತಿ ನಿರ್ಮಾಣಗೊಳ್ಳುತ್ತದೆ – ಇದನ್ನು herd immunity ಎಂದು ಕರೆಯುತ್ತೇವೆ. ಇದರಿಂದಾಗಿ, ಕಾರಣಾಂತರಗಳಿಂದಾಗಿ ಪ್ರತಿರೋಧಕ ಶಕ್ತಿ ಇಲ್ಲದವರಿಗೂ (ಉದಾಹರಣೆ – ಲಸಿಕೆಗಳಿಗೆ ಅಲರ್ಜಿ ಇದ್ದವರು, ಎಚ್ಐವಿ ಕ್ಯಾನ್ಸರ್ ನಂತಹ ಖಾಯಿಲೆಯಿರುವವರು) ಪರೋಕ್ಷವಾಗಿ ರಕ್ಷಣೆ ಸಿಗುತ್ತದೆ. ಲಸಿಕೆ ವಿರೋಧಿಗಳ ಸಂಖ್ಯೆ ಕಡಿಮೆಯಿದ್ದರೂ, herd immunity ಗೆ ಹಾನಿ ಉಂಟಾಗಿ, ಹಳೆಯದಾದ ಕೇಳದಂತಹ ಖಾಯಿಲೆಗಳು ಮತ್ತೆ ಹರಡುವ ಸಾಧ್ಯತೆ ಇದೆ. ಲಸಿಕೆ ವಿರೋಧಿ ನಂಬಿಕೆಗಳು ಭಾರತದಂತಹ ದೇಶಗಳಲ್ಲಿ ಹರಡದಿರಲಿ ಎಂದು ಆಶಿಸೋಣ.

Share on facebook
Facebook
Share on google
Google+
Share on twitter
Twitter
Share on linkedin
LinkedIn

1 thought on “ಲಸಿಕೆ ವಿರೋಧಿ ನಂಬಿಕೆಗಳು”

Comments are closed.

%d bloggers like this: